ಹಾಡಿನೊಂದಿಗೆ ಬರಲು ‘ರಾಜರು’ ತಯಾರು!
Posted date: 26 Wed, Oct 2016 – 12:50:04 PM

ಎಂ.ಆರ್.ಎಸ್. ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗಿರುವ ಸಿನಿಮಾ ‘ರಾಜರು’. ಈ ಚಿತ್ರಕ್ಕೆ ‘ಅರಮನೆ ಇಲ್ಲ ರಾಣಿ ಹುಡುಕ್ತಾವ್ರೆ’ ಎನ್ನುವ ಹೊಸ ಬಗೆಯ, ಕುತೂಹಲ ಕೆರಳಿಸುವ ಅಡಿ ಬರಹ ಕೂಡಾ ಇದೆ.
ಚಿತ್ರದ ಶೀರ್ಷಿಕೆ ಮತ್ತು ಟ್ಯಾಗ್ ಲೈನ್ ಕಾರಣಕ್ಕೇ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ಈ ಚಿತ್ರದ ನಿರ್ದೇಶಕರು ಗಿರೀಶ್ ಮೂಲಿಮನಿ. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಗಿರೀಶ್ ಮೂಲಿಮನಿ ಎಲ್‌ಎಲ್‌ಬಿ ವ್ಯಾಸಂಗ ಮುಗಿಸಿ ವಕೀಲಿ ವೃತ್ತಿ ಮಾಡಿಕೊಂಡಿದ್ದವರು. ಆದರೆ ಸಿನಿಮಾ ಎಂಬ ಮಾಯೆಯ ಸೆಳೆತದಿಂದ ಆ ವೃತ್ತಿಗೆ ಗುಡ್ ಬೈ ಹೇಳಿ, ಸೀದಾ ಬಂದು ಬೆಂಗಳೂರು ಸೇರಿ, ನಿರ್ದೇಶನದ ಪಟ್ಟುಗಳನ್ನು ಕಲಿತವರು. ಆರಂಭದಲ್ಲಿ ನಾಗೇಂದ್ರ ಅರಸ್ ಅವರ ರಾಕಿ ಮತ್ತು ಯಾರೆ ನೀ ದೇವತೆ ಚಿತ್ರಗಳು ಸೇರಿದಂತೆ ಒಂದಿಷ್ಟು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಗಿರೀಶ್ ನಂತರ ಬಂದು ನೆಲೆ ನಿಂತಿದ್ದು ಕಿಚ್ಚ ಸುದೀಪ ಅವರೊಟ್ಟಿಗೆ. ಸುದೀಪ್ ಅವರ ಕೆಂಪೇಗೌಡ, ವರದ ನಾಯಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಗಿರೀಶ್ ಮಾಣಿಕ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೂ ಕಾರ್ಯ ನಿರ್ವಹಿಸಿದ್ದರು. ಅದೇ ವೇಳೆಗೆ ಸ್ವತಂತ್ರ ನಿರ್ದೇಶಕರಾಗುವ ಅವಕಾಶ ಒದಗಿಬಂದಿದ್ದರಿಂದ ‘ರಾಜರು’ಗಳ ಸಖ್ಯ ಬೆಳೆಸಿದರು.
‘ರಾಜರು’ ಚಿತ್ರಕ್ಕೆ ಮೂವರು ನಿರ್ಮಾಪಕರು. ಎಂ. ಮೂರ್ತಿ, ಪಿ. ಶಿವಕುಮಾರ್ ಮತ್ತು ಹೆಚ್. ರಮೇಶ್ ಸೇರಿ ಪಾಲುದಾರಿಕೆಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪಿ. ಶಿವಕುಮಾರ್ ಅವರು ಮಾಜಿ ನಗರಪಾಲಿಕೆ ಸದಸ್ಯರು ಮತ್ತು ಇನ್ನುಳಿದ ಇಬ್ಬರು ನಿರ್ಮಾಪಕರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಗಿರೀಶ್ ಮೂಲಿಮನಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ  ದಿನದಿಂದಲೇ ಈ ನಿರ್ಮಾಪಕರ ಪರಿಚಯವಿತ್ತಂತೆ. ‘ನಾವು ಎಂದಾರೂ ಸಿನಿಮಾ ಮಾಡಿದರೆ  ಅದಕ್ಕೆ ನೀವೇ ನಿರ್ದೇಶಕರು’ ಎಂಬ ಭರವಸೆ ನೀಡಿದ್ದರಂತೆ. ಹೀಗಿರುವಾಗಲೇ ಕ್ರಿಷ್ ರಂಗಸ್ವಾಮಿ ಎಂಬ ಪ್ರತಿಭಾವಂತ ಕತೆಗಾರ ಹೆಣೆದುತಂದ ಒಂದು ಎಳೆ ನಿರ್ಮಾಪಕರಿಗೂ ಒಪ್ಪಿಗೆಯಾಗಿ, ಆ ಕತೆಗೆ ಚಿತ್ರಕತೆ ಮತ್ತು ಸಂಭಾಷಣೆಯನ್ನು ಸ್ವತಃ ಗಿರೀಶ್ ಮೂಲಿಮನಿ ಅವರೇ ರಚಿಸಿದರು. ಆ ಮೂಲಕ ‘ರಾಜರು’ ಸಿನಿಮಾ ಆರಂಭಗೊಂಡಿತ್ತು. ಅದಾಗಲೇ, ಜಾಲಿಡೇಸ್, ಪೈಪೋಟಿ ಮತ್ತು ಕೇಸ್ ನಂಬರ್ ೧೮/೯ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ನಿರಂಜನ್ ಶೆಟ್ಟಿ ಅವರು ಆಯ್ಕೆಯಾದರು. ಗಡ್ಡ ವಿಜಿ ನಿರ್ದೇಶನದ ‘+’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಶಾಲಿನಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಹೀಗೆ ಶುರುವಾದ ‘ರಾಜರು’ ಚಿತ್ರ ‘ಇಲ್ಲಿ ಎಲ್ಲರೂ ರಾಜರೇ. ಆದರೆ ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ; ಬದುಕಿಗಾಗಿ ಅನ್ಯ ಮಾರ್ಗಗಳನ್ನು ತುಳಿದರೆ ಆಗಬಾರದ್ದೇ ಆಗುತ್ತದೆ’ ಎನ್ನುವ ಪ್ರಧಾನ ಸಂದೇಶವನ್ನು ಹೊಂದಿದೆ. ಈ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೋ ಅಷ್ಟೇ ಮಟ್ಟಿಗೆ ನಾಯಕಿಯ ಪಾತ್ರ ಕೂಡಾ ಪ್ರಾಮುಖ್ಯತೆಯನ್ನು ಪಡೆದಿದೆ. ಅರಮನೆಯಿಲ್ಲದ ರಾಜನಿಗೆ ಸಿಕ್ಸೂಚಿಯಂತೆ ಬರುವ ರಾಣಿಯದ್ದೇ ಇಲ್ಲಿ ಬಲು ದರ್ಬಾರು! ಈ ಕಾರಣಕ್ಕೇ ‘ಅರಮನೆ ಇಲ್ಲ-ರಾಣಿ ಹುಡುಕ್ತಾವ್ರೆ’ ಎನ್ನುವ ಅಡಿಬರಹವನ್ನು ಇರಿಸಲಾಗಿದೆ.
‘ರಾಜರು’ ಚಿತ್ರದಲ್ಲಿ ಕಥೆಯಷ್ಟೇ ಕಾಡುವ ಮತ್ತೊಂದು ಅಂಶವೆಂದರೆ, ಅದು ಸಂಗೀತ. ಶ್ರೀಧರ್ ವಿ. ಸಂಭ್ರಮ್ ಅವರು ನೀಡಿರುವ ಸುಂದರ ಸಂಗೀತಕ್ಕೆ ಜಯಂತ್ ಕಾಯ್ಕಿಣಿ, ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಯೋಗರಾಜ ಭಟ್ ಹಾಡುಗಳನ್ನು ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ವಿಶೇಷ ಗೀತೆಯೊಂದಕ್ಕೆ ದನಿ ನೀಡಿದ್ದಾರೆ. ಅರ್ಮನ್ ಮಲ್ಲಿಕ್ ಮತ್ತು ಶ್ರೇಯಾ ಘೋಷಾಲ್ ಕೂಡಾ ಹಾಡಿದ್ದಾರೆ. ‘ಮುಂಗಾರು ಮಳೆ-೨’ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ’ ಚಿತ್ರದ ಹಾಡಿನ ನಂತರ ಅರ್ಮನ್ ಮಲ್ಲಿಕ್ ಅವರಿಗೆ ಕನ್ನಡದಲ್ಲಿ ದೊಡ್ಡ ಯಶಸ್ಸು ‘ರಾಜರು’ ನೀಡುತ್ತಾರೆ ಎನ್ನುವ ನಂಬಿಕೆ ಖುದ್ದು ಚಿತ್ರತಂಡದ್ದು.
ಸಣ್ಣಪುಟ್ಟ ಅಡೆತಡೆಗಳ ನಡುವೆಯೂ ಯಾವುದೇ ದೊಡ್ಡ ಸಮಸ್ಯೆ ಎದುರಾಗದೆ, ಸಲೀಸಾಗಿ ಚಿತ್ರೀಕರಣ ಪೂರೈಸಿರುವ ‘ರಾಜರು’ ಚಿತ್ರದ ಹಾಡುಗಳು ದೀಪಾವಳಿ ಮುಗಿಯುತ್ತಿದ್ದಂತೇ ಲೋಕಾರ್ಪಣೆಗೊಳ್ಳಲಿವೆ ಮತ್ತು ಡಿಸೆಂಬರ್ ೨೦ರ ನಂತರ ತೆರೆಗೆ ಬರಲು ಸಕಲ ರೀತಿಯ ತಯಾರಿ ನಡೆಸಿದೆ. ಈಗಾಗಲೇ ಡಬ್ಬಿಂಗ್, ಡಿಐ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೂಡಾ ಶೇ. ೫೦ರಷ್ಟು ಸಂಪೂರ್ಣಗೊಂಡಿದೆ.
‘ರಾಜರು’ ಚಿತ್ರಕ್ಕಾಗಿ ಬೆಂಗಳೂರು, ಸಕಲೇಶಪುರ, ತುಮಕೂರು, ಹಾಸನ, ಗೋವಾ ಸೇರಿದಂತೆ ೫೧ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ಎಲ್ಲ ಹಾಡುಗಳಿಗೆ ಮುರಳಿ ಅವರ ನೃತ್ಯ ಸಂಯೋಜನೆ ಇದೆ. ಈ ಚಿತ್ರದಲ್ಲಿ ನಿರಂಜನ್ ಶೆಟ್ಟಿ ಮತ್ತು ಶಾಲಿನಿ ನಾಯಕ, ನಾಯಕಿಯರಾಗಿ ಕಾಣಿಸಿಕೊಂಡರೆ, ‘ಮೈತ್ರಿ’ ಚಿತ್ರದಲ್ಲಿ ಕಳ್ಳನ ಪಾತ್ರ ನಿರ್ವಹಿಸಿದ್ದ ಜಗದೀಶ್ ಮತ್ತು ಕಿರುತೆರೆ ನಟ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ರಾಕ್‌ಲೈನ್ ಸುಧಾಕರ್, ಕರಿಸುಬ್ಬು ಮುಂತಾದವರ ತಾರಾಗಣವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed